ಶ್ರೀ ಶರಭ ಶಾಸ್ತ್ರಿ (೧೮೭೨-೧೯೦೪) ದಕ್ಷಿಣ ಭಾರತೀಯ ಕರ್ನಾಟಕ ಸಂಗೀತ ಕೊಳಲು ವಾದಕರಾಗಿದ್ದರು. ಇವರ ಸಮಯದವರೆಗೆ ಕೊಳಲು ಜನಪದೀಯ ವಾದ್ಯವಾಗಿತ್ತು, ಇದನ್ನು ಮುಖ್ಯವಾಹಿನಿಗೆ ಮತ‍್ತು ಕರ್ಣಾಟಕೀ ಸಂಗೀತ ಕಛೇರಿಗಳಿಗೆ ಉಪಯೋಗಿಸುವ ಕೆಲಸವನ್ನು ಶರಭ ಶಾಸ್ತ್ರಿಗಳು ಮಾಡಿದರು. ಕಛೇರಿಗಳಲ್ಲಿ ಕೊಳಲು ಮುಖ್ಯವಾದನ ಆಗುವಂತೆ ಮಾಡಿದರು. ಅವರು "ಮೊದಲ ಪ್ರಖ್ಯಾತ ಬ್ರಾಹ್ಮಣ ಕೊಳಲು ವಾದಕ" ಎಂದು ಹೆಸರು ಪಡೆದಿದ್ದರು. == ಹುಟ್ಟು ಮತ್ತು ಬಾಲ್ಯ == ಶ್ರೀ ಶರಭ ಶಾಸ್ತ್ರಿ ೧೮೭೨ರಲ್ಲಿ ಶ್ರೀ ವಿಶ್ವನಾಥ ಶಾಸ್ತ್ರಿ ಹಾಗು ಶ್ರೀಮತಿ ಧರ್ಮಾಂಬಾಳ್ ದಂಪತಿಗಳಿಗೆ ಜನಿಸಿದರು. ಅವರ ತಾಯಿ, ತಿರುವೈಯರು ಬಳಿ ತಿರುವಡಿ ಎಂಬ ಸ್ಥಳದವರು, ಅವರ ಪಕ್ಕದ ಮನೆ ತ್ಯಾಗರಾಜರದೇ ಆಗಿತ್ತು. ಶರಭ ಶಾಸ್ತ್ರಿ ಮತ್ತು ಅವರ ಸಹೋದರ (ರಾವ್ ಬಹದ್ದೂರ್) ಶಿವಕುಮಾರ ಶಾಸ್ತ್ರಿ. ತಮ್ಮ ತಂದೆಯನ್ನು ಸಣ್ಣ ವಯಸ್ಸಿನಲ್ಲೆ ಕಳೆದುಕೊಂಡರು. ಶರಭ ಶಾಸ್ತ್ರಿಗಳು ಚಿಕ್ಕ ಪ್ರಾಯದಲ್ಲಿ ಕಣ್ಣು ಕಳೆದುಕೊಳ್ಳುವ ದುರ್ಭಾಗ್ಯವು ಒದಗಿತು. === ಸಂಗೀತ ಕಲಿಕೆ === ಶರಭ ಶಾಸ್ತ್ರಿಗಳು ತಮ್ಮ ಸೊದರಮಾವ ತಿರುವಡಿಯ ಶ್ರೀ ಕುಪ್ಪುಸ್ವಾಮಿ ಶಾಸ್ತ್ರಿ ಅವರ ಬಳಿ ಸಂಗೀತವನ್ನು ಕಲಿಯಲು ಪ್ರಾರಂಭಿಸಿದರು. ನಂತರ ತ್ಯಾಗರಾಜರ ಶಿಷ್ಯರಾದ ಮಾನಂಬುಚಾವಡಿ ಶ್ರೀ ವೇಂಕಟಸುಬ್ಬ ಐಯ್ಯರ್‍ ಅವರ ಬಳಿ ಕಲಿಕೆಯನ್ನು ಮುಂದುವರಿಸಿದರು. ಮುಂದೆ ಶ್ರೀ ಗೊವಿಂದ ನಯನಕ್ಕರ್ ಅವರ ಕೊಳಲಿನ ಗುರುಗಳಾಗಿ ಅದರ ಪರಿಣತೆಯನ್ನು ತಿಳಿಯಪಡಿಸಿದರು. ಶರಭ ಶಾಸ್ತ್ರಿಗಳು ಅಂಬು ಅಮ್ಮಾಳ್ ಅವರನ್ನು ವರಿಸಿ ಕುಂಭಕೊಣಮ್ ಊರಿನ ಸೊಲಿಯಪ್ಪ ಮುದಲಿ ಬೀದಿಯಲ್ಲಿ ವಾಸಿಸಿದರು. == ಎರಹರಮ್ ಅಲ್ಲಿ ಹರಕೆ == ಶಾಸ್ತ್ರಿಗಳು ಎರಹರಮ್ ಎಂಬಲ್ಲಿ ಇರುವ ಶ್ರಿ ಶಂಕರಿ ಸಮೇತ ಸ್ಕಂದನಾಥ ಸ್ವಾಮಿ ದೇವಸ್ಥಾನದಲ್ಲಿ ಕಾವಟಿ/ಕಾವಡಿಯ ಹರಕೆಯನ್ನು ಹೊತ್ತು ಪೂಜೆಯನ್ನು ನೆರವೇರಿಸಿ ತಮಗೂ ಮತ್ತು ಸ್ಥಳೀಯ ಜನರಿಗೂ ನೆಮ್ಮದಿಯನ್ನು ತಂದರು, ಹಾಗು ದೇವಸ್ಥಾನಕ್ಕೆ ಹೆಸರು ತಂದರು. ಮುಂದೆ ಅವರು "ಶರಭ ಕಾವಡಿ", "ಮಚ್ಛ ಕಾವಡಿ" ಇತ್ಯಾದಿ ಕಾವಡಿಗಳನ್ನು ಸಂಘಟಿಸಿದರು. == ಸಾಧನೆಗಳು == ಶರಭ ಶಾಸ್ತ್ರಿಯವರಿಗೆ ತಮ್ಮ ಬಾಲ್ಯದಿಂದ ಬಂದ ಕುರುಡುತನ ಅವರ ಪ್ರತಿಭೆಯನ್ನು ಕುಂಟಿತಗೊಳಿಸದೆ ಇನ್ನೂ ಹೆಚ್ಚುಗೊಳಿಸಿತು. ಕೊಳಲಿನೊಂದಿಗೆ ಪ್ರಯೋಗಗಳನ್ನು ಮಾಡುತ್ತ ಬೆರಳಿನ ಅಭ್ಯಾಸದಿಂದ ಭಾರತೀಯ ಸಂಗೀತದ ಸಂಪೂರ್ಣ ಸ್ವರಶ್ರೇಣಿಯನ್ನು ಹೊರಗೆ ತಂದರು. ಶ್ರಿ ಶರಭ ಶಾಸ್ತ್ರಿಗಳು ೫೦೦ಕ್ಕೂ ಅಧಿಕ ನವನ್ಮಾರ್ ಚರಿತಂ ಸಾಹಿತ್ಯಗಳನ್ನು ರಚಿಸಿದರು. ಶ್ರಿ ಶರಭ ಶಾಸ್ತ್ರಿಗಳು ವಿಶಿಷ್ಟವಾದ ಕೊಳಲುವಾದನ ತಂತ್ರವನ್ನು (ತು-ತು ಕಾರಗಳು) ಬಳಕೆಗೆ ತಂದರು. ಕೊಳಲಿನೊಂದಿಗೆ ತಾನಂ ಹೊಸದಾಗಿ ನುಡಿಸಿದರು. ಅವರಿಗೆ ಒಮ್ಮೆ ಕೇಳಿದರೆ ಅದರನ್ನು ಗ್ರಹಿಸುವ ಪ್ರತಿಭೆ ಇದ್ದುದರಿಂದ "ಏಕ ಚಂದ್ರಗ್ರಾಹಿ" ಎಂಬ ಬಿರುದು ಬಂದಿತ್ತು. ಪಲ್ಲಡಂ ಸಂಜೀವ ರಾವ್ ಅವರು ಶಾಸ್ತ್ರಿಗಳ ನೇರ ಶಿಷ್ಯರಾಗಿದ್ದರು. ಪಲ್ಲಡಂ ತಮ್ಮ ಸಂಗೀತ ಜ್ಞಾನವನ್ನು ಎಚ್.ರಾಮಚಂದ್ರ ಶಾಸ್ತ್ರಿಯವರಿಗೆ ಧಾರೆಯೆರೆದರು. ಈ ರೀತಿಯ ಕಲಾಪ್ರಕಾರವನ್ನು ಜಿ.ಸ್.ರಾಜನ್, ಲುಡ್ವಿಗ್ ಪೆಸ್ಚ್ ಮತ್ತು ಟಿ.ಶಶಿಧರ್ ಅವರುಗಳು ಪ್ರಖ್ಯಾತಗೊಳಿಸಿದರು. ಶಾಸ್ತ್ರಿಗಳನ್ನು ಆಗಿನ ಮೈಸೂರಿನ ಮಹಾರಾಜರು 'ಆಸ್ಥಾನ ವಿದ್ವಾಂಸ'ರ ಸ್ಥಾನಕ್ಕೆ ಬರಮಾಡಿಕೊಂಡರು, ಆದರೆ ಶಾಸ್ತ್ರಿಗಳು ಈ ಆಮಂತ್ರಣವನ್ನು ಪ್ರೀತಿಯಿಂದಲೆ ನಿರಾಕರಿಸಿದರು. ಅವರು ಸಂಗೀತ ಕಲೆಯನ್ನು ವಾಣಿಜ್ಯೀಕರಣಗೊಳಿಸುವುದರ ವಿರುದ್ದ ಇದ್ದರು. == ಕರ್ಣಾಟಕೀ ಕೊಳಲಿನ ಮೂಲ == ಉತ್ತರಭಾರತದ ಬಾನ್ಸುರಿ ಕೊಳಲು ಹೆಚ್ಚಾಗಿ ೬ ರಂದ್ರದ ಕೊಳಲು, ಹಾಗು ದಕ್ಷಿಣಭಾರತದ ಕೊಳಲು ೮ ರಂದ್ರದ ಕೊಳಲು ಆಗಿರುತ್ತದೆ. ೧೯ನೆ ಶತಮಾನದವರೆಗೆ ದಕ್ಷಿಣಭಾರತದ ಕೊಳಲನ್ನು ಸಂಗೀತ ಕಛೇರಿಗಳಲ್ಲಿ ಬಳಸುತ್ತಿರಲಿಲ್ಲ. ಶಾಸ್ತ್ರಿಗಳು ವಿವಿಧ ಪ್ರಯೋಗಗಳ ನಂತರ ಈಗಿನ ಪ್ರಕಾರದ ಕರ್ಣಾಟಕೀ ಕೊಳಲನ್ನು ಆವಿಶ್ಕರಿಸಿ, ನಂತರ ಸಂಗೀತ ಕಛೇರಿಗಳಲ್ಲಿ ಪರಿಣಾಮಕಾರಿ ಮುಖ್ಯವಾದನವಾಗಿ ಬಳಕೆಗೆ ತಂದರು. ಶರಭ ಶಾಸ್ತ್ರಿ ಶ್ಯೆಲಿ ಅಥವಾ 'ಬನಿ'ಯನ್ನು ಹುಟ್ಟುಹಾಕಿದರು, ಇದನ್ನು ಅವರ ಶಿಷ್ಯರಾದ ಸಂಜೀವ ರಾವ್ ಮುಂದುವರಿಸಿದರು. ಆದಾಗ್ಯೂ, ಸ್ವಶಿಕ್ಷಿತ "ಮಾಲಿ" ಅವರು ಕರ್ನಾಟಕ ಕೊಳಲನ್ನು ಜನಪ್ರಿಯಗೊಳಿಸುವಲ್ಲಿ ಕ್ರಾಂತಿಯನ್ನು ತಂದರು ಮತ್ತು ಅವರ ಪರಂಪರೆಯನ್ನು ಎನ್. ರಮಣಿ ಮತ್ತು ಮಾಲಿಯ ಇತರ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಶಿಷ್ಯರು ನಡೆಸಿದರು. ಶರಭ ಶಾಸ್ತ್ರಿ ಕಂಡುಹಿಡಿದ ಬೆರಳಿನ ತಂತ್ರವು ಹೆಚ್ಚು ವೈಜ್ಞಾನಿಕ ಮತ್ತು ರಾಗಮಾಲಿಕಾ ಪಟ್ಟಿಯಂತೆ () ನಿಖರವಾಗಿತ್ತು. ಕರ್ನಾಟಕ ಸಂಗೀತದ ಸಂಕೀರ್ಣವಾದ ಗಮಕಗಳಿಗೆ ಅಗತ್ಯವಾದ ಅತ್ಯಲ್ಪ ಏರಿಳಿತಗಳು ಈ ಬೆರಳಿನ ವ್ಯವಸ್ಥೆಯಿಂದ ಒಳಗೊಂಡವು. ಸರಳ ರಾಗಗಳನ್ನು ಮಾತ್ರ ನುಡಿಸುವುದರಿಂದ ಹಿಡಿದು ಪ್ರತಿ ರಾಗದ ಸೂಕ್ಷ್ಮ ವ್ಯತ್ಯಾಸಗಳೊಂದಿಗೆ ಪೂರ್ಣ ಪ್ರಮಾಣದ ಕೃತಿಗಳನ್ನು ಉತ್ಪಾದಿಸುವ ಸಾಮರ್ಥ್ಯಕ್ಕೆ ಮುನ್ನಡೆಯುವ ಮೂಲಕ, ಕೊಳಲುಕೂಡ ವೀಣೆಯ ಜೊತೆ ಸಂಗೀತ ವಾದ್ಯವಾಗಿ ಸಮನಾಗಿ ಬರುತ್ತದೆ. ಶಾಸ್ತ್ರಿಗಳು ನುಡಿಸಿದ ಯಾವುದೇ ಧ್ವನಿಮುದ್ರಣಗಳು ಉಳಿದುಕೊಂಡಿಲ್ಲ, ಮತ್ತು ಅವರ ಬಗ್ಗೆ ಕೆಲವು ದೊಡ್ಡ ಗ್ರಂಥಗಳಲ್ಲಿ ಬಿಟ್ಟರೆ ಇನ್ನೆಲ್ಲು ಉಲ್ಲೇಖಗಳಿಲ್ಲ. ಅವರ ಬಗ್ಗೆ ಅವರ ವಿದ್ಯಾರ್ಥಿ ಹೆಸರಾಂತ ಪಲ್ಲಡಮ್ ಸಂಜೀವ ರಾವ್ ಮೂಲಕ ಮಾತ್ರ ತಿಳಿದಿದ್ದೇವೆ. == ಸಂಸ್ಕ್ರತ ವಿದ್ವಾಂಸ == ಶಾಸ್ತ್ರಿ ಒಬ್ಬ ಮಹಾನ್ ವಿದ್ವಾಂಸರಾಗಿದ್ದರು ಮತ್ತು ತಿರುಪಲಾನಂ ಪಂಚಪಕೇಶ ಶಾಸ್ತ್ರಿಗಳ್, ಸುಲಮಂಗಲಂ ವೈದ್ಯನಾಥ ಭಾಗವತಾರ್ ಮತ್ತು ಇತರ ವಿದ್ವಾಂಸರೊಂದಿಗೆ ಚರ್ಚಿಸುತ್ತಿದ್ದರು. ಸಂಗೀತ ವಿದ್ವಾಂಸರಾದ ತಿರುಕೋಡಿಕಾವಲ್ ಕೃಷ್ಣ ಅಯ್ಯರ್, “ಪಿಟೀಲು” ಗೋವಿಂದಸಾಮಿ ಪಿಳ್ಳೈ, ಪಟ್ಟಣಂ ಸುಬ್ರಮಣ್ಯ ಅಯ್ಯರ್, ತಂಜಾವೂರು ಕೃಷ್ಣ ಭಗವಥರ್, ಮೃದಂಗಂ ನಾರಾಯಣಸ್ವಾಮಿ ಅಪ್ಪಾ, ಮೃದಂಗಂ ಅಳಗ ನಂಬಿ ಪಿಳ್ಳೈ, ಕುಂಭಕೋಣಂ ಶಿವಕೋಲುಂಡು ಮತ್ತು ತಿರುಮರುಗಲ್ ನಟೇಶ ನಾಯಕರಾರ್ ಅವರ ಸಮಕಾಲೀನರು ಮತ್ತು ಅವರ ಸಂಗೀತ ಕಚೇರಿಗಳಲ್ಲಿ ಅವರೊಂದಿಗೆ ಭಾಗವಹಿಸುತ್ತಿದ್ದರು. == ಮರಣ == ಶ್ರೀ ಶರಭ ಶಾಸ್ತ್ರಿಗಳು ೧೯೦೪ ರಲ್ಲಿ ತಮ್ಮ ೩೨ನೆ ವಯಸ್ಸಿನಲ್ಲಿ ಕುಂಭಕೋಣಂನಲ್ಲಿ ನಿಧನರಾದರು. ಶರಭ ಶಾಸ್ತ್ರಿ, ಅನೇಕ ಮಹಾನ್ ಪ್ರತಿಭೆಗಳಂತೆ, ಅಲ್ಪಾವಧಿಯ ಜೀವನವನ್ನು ಮಾತ್ರ ನಡೆಸಿದರು. ೩೨ನೆ ವಯಸ್ಸಿನಲ್ಲಿ ಅವರ ಮರಣದ ನಂತರ, ಅವರ ಕೆಲಸವನ್ನು ಅವರ ಅತ್ಯಂತ ಪ್ರಸಿದ್ಧ ಶಿಷ್ಯ ಪಲ್ಲಡಮ್ ಸಂಜೀವ ರಾವ್ ಅವರು ನಿರ್ವಹಿಸಿದರು, ಅವರು ಬೆರಳಿನ ವ್ಯವಸ್ಥೆಯನ್ನು ಸುಧೀರ್ಘಗೊಳಿಸಿದರು ಮತ್ತು ಕೊಳಲನ್ನು ಏಕವ್ಯಕ್ತಿ () ಸಂಗೀತ ಸಾಧನವಾಗಿ ಜನಪ್ರಿಯಗೊಳಿಸಿದರು. ಶರಭ ಶಾಸ್ತ್ರಿ ಕೊಳಲನ್ನು ಕಛೇರಿಗಳಲ್ಲಿ ಮುಖ್ಯವಾದನ ಮಾಡುವ ಮೂಲಕ ಅವರ ಕೊಡುಗೆ ಅಮರವಾಗಿದೆ. == ಶ್ರೀ ಶರಭ ಶಾಸ್ತ್ರಿಗಳ ನೆನಪು ಮತ್ತು ಸ್ಮಾರಕಗಳು == === ಶಾಸ್ತ್ರಿಯವರ ಕೊಳಲು === ಶಾಸ್ತ್ರಿಯವರು ಉಪಯೋಗಿಸಿದ ಕೊಳಲು ಕುಂಭಕೋಣಂನ ಸೊಲೈಪ್ಪನ್ ಬೀದಿ ೧೧೦, ಶ್ರೀ ರಾಮ ಭಜನೈ ಸಭಾ ಸಂಸ್ಥೆಯಲ್ಲಿ ಈಗಲೂ ಪ್ರದರ್ಶನಕ್ಕಿಡಲಾಗಿದೆ. ಶ್ರೀ ಶರಭ ಶಾಸ್ತ್ರಿಗಳು ಅವರ ಕೊಳಲನ್ನು ಶಾಸ್ತ್ರಿ ಅವರ ಕುಟುಂಬ ಸದಸ್ಯರಿಂದ ೧೦೦ಕ್ಕೂ ಹೆಚ್ಚು ವರ್ಷಗಳಿಂದ ಸಂರಕ್ಷಿಸಲಾಗಿದೆ. === ವೇಣುಗಾನಮ್ ಶ್ರೀ ಶರಭ ಶಾಸ್ತ್ರಿಗಳ್ ಸ್ಮಾರಕ ಸಂಸ್ಥೆ === "ವೇಣುಗಾನಂ ಶ್ರೀ ಶರಭ ಶಾಸ್ತ್ರೀಗಳ್ ಸ್ಮಾರಕ ಸಂಸ್ಥೆ" ಹೆಸರಿನಲ್ಲಿ ಒಂದು ಸಂಸ್ಥೆ ರಚನೆಯಾಗಿದೆ ಮತ್ತು ಕಾರ್ಯನಿರ್ವಹಿಸುತ್ತಿದೆ. ಸಂಗೀತ, ಸಾಂಸ್ಕೃತಿಕ ಮತ್ತು ಸೇವಾಧಾರಿತ ಕಾರ್ಯಕ್ರಮಗಳನ್ನು ಆಯೋಜಿಸಿದೆ ಮತ್ತು ಪ್ರಮುಖ ವ್ಯಕ್ತಿಗಳಿಂದ ಸಂಸ್ಥೆಯನ್ನು ನಿರ್ವಹಿಸಲಾಗುತ್ತಿದೆ. ಮಾರ್ಗಶಿರ ಮಾಸದ ಏಕಾದಶಿಯಂದು ಭಜನೆ ಮತ್ತು ರಾಧಾ ಕಲ್ಯಾಣವನ್ನು ಹದಿನೈದು ದಿನ ನಡೆಸಲಾಗುತ್ತದೆ. === ಶ್ರೀ ರಾಮ ಭಜನೈ ಸಭಾ === ಶಾಸ್ತ್ರಿ ಬಹಳ ಸರಳ ಜೀವನವನ್ನು ನಡೆಸಿದರು ಮತ್ತು ತಮ್ಮ ಸಂಗೀತವನ್ನು ಶ್ರೀರಾಮನಿಗೆ ಪೂಜೆಯಾಗಿ ಅರ್ಪಿಸಿದರು. ಶ್ರೀರಾಮ ನವಮಿ ಉತ್ಸವವನ್ನು ಅವರು ಪ್ರತಿವರ್ಷ ನಡೆಸುತ್ತಿದ್ದರು, ಉತ್ಸವದಲ್ಲಿ ಆ ಸಮಯದ ಎಲ್ಲಾ ಪ್ರಮುಖ ಸಂಗೀತಗಾರರು ಭಾಗವಹಿಸುತ್ತಿದ್ದರು. ಈ ಸಂಪ್ರದಾಯವನ್ನು ಇಂದಿನವರೆಗೂ ಉತ್ಸಾಹಿಗಳ ಒಂದು ಗುಂಪು ಮುಂದುವರಿಸಿದೆ. ಕುಂಭಕೋಣಂ ಶ್ರೀ ರಾಮ ಭಜನೈ ಸಭೆಯು ಸುಮಾರು ೧೨೫ ವರ್ಷಗಳ ಹಿಂದೆ ಪ್ರಸಿದ್ಧ ವೇಣುಗಾನಂ ಶ್ರೀ ಶರಭ ಶಾಸ್ತ್ರಿಗಳು ಸ್ಥಾಪಿಸಿ ಪೋಷಿಸಿದರು, ಇದು ವಿವಿಧ ಸಾಂಸ್ಕೃತಿಕ ಮತ್ತು ಸೇವಾ ಸಂಸ್ಥೆಗಳಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದುಕೊಂಡಿದೆ. ಈ ಸಂಸ್ಥೆಯು ಸಾಂಸ್ಕ್ರತಿಕ ಕಾರ್ಯಕ್ರಮಗಳೊಂದಿಗೆ ಹಬ್ಬಗಳಲ್ಲಿ ಅನ್ನದಾನ ಸೇರಿದಂತೆ ಸಮುದಾಯ ಸೇವೆಗಳನ್ನು ನೀಡುತ್ತಿದೆ. == ಉಲ್ಲೇಖಗಳು ==